No Ads

ಸಂಸತ್ತಿನಲ್ಲಿ ಬಾಯಿ ಬಿಡದ ಗದ್ದಿಗೌಡರ್ ಸೋಲಿಸಿ, ಸಂಯುಕ್ತ ಪಾಟೀಲ್ ಗೆಲ್ಲಿಸಿ

ಜಿಲ್ಲೆ 2024-04-27 18:24:56 86
post

ರಬಕವಿ- ಬನಹಟ್ಟಿ: ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯವಾದಾಗ ಸಂಸತ್ತಿನಲ್ಲಿ ಮಾತನಾಡದ ಗದ್ದಿಗೌಡರ್‌ ಅವರನ್ನು ಈ ಬಾರಿ ಸೋಲಿಸಿ, ಸಂಯುಕ್ತ ಪಾಟೀಲ್‌ ಅವರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿನ ರಬಕವಿ - ಬನಹಟ್ಟಿಯ ಎಸ್ ಆರ್ ಎ ಮೈದಾನದಲ್ಲಿ ನಡೆದ ಪ್ರಜಾಧ್ವನಿ-2 ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಅವರ ಮತಯಾಚಿಸಿ ಅವರು ಮಾತನಾಡಿದರು. ರಾಜ್ಯಕ್ಕೆ ಬರ ಪರಿಹಾರ ನೀಡಿ ಅಂತ ನಾವು ಮನವಿ ಮಾಡಿದೆವು. ಆದರೆ ಕೇಂದ್ರ ಸರ್ಕಾರ ಹಣ ನೀಡದೆ ವಂಚನೆ ಮಾಡಿತು. ರಾಜ್ಯದ ಸಂಸದರೂ ರಾಜ್ಯದ ಬಗ್ಗೆ ಬಾಯಿ ಬಿಡಲಿಲ್ಲ. ಇಪ್ತನ್ನು ವರ್ಷ ಸಂಸದರಾಗಿದ್ದ ಗದ್ದಿಗೌಡರ್‌ ಅವರು ರಾಜ್ಯದ ಬಗ್ಗೆ ಮಾತನಾಡಲಿಲ್ಲ. ಅವರ ಗದ್ದುಗೆ ಇಳಿಸಿ ಎಂದು ಹೇಳಿದರು. ರಾಜ್ಯದ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಅವರ ಮುಂದೆ ಮಾತನಾಡುವ ಧೈರ್ಯ ಇಲ್ಲ. ರಾಜ್ಯದ ಪರ ಮಾತನಾಡುವ ಸಂಸದರು ನಮಗೆ ಬೇಕು. ಆದ್ದರಿಂದ ಈ ಬಾರಿ ಕಾಂಗ್ರೆಸ್‌ ಗೆಲ್ಲಿಸಿ ಎಂದು ಮನವಿ ಮಾಡಿದರು. ಬರಪರಿಹಾರಕ್ಕೆ ಹಣ ಕೊಡಿ ಅಂತ ಕೇಳಿದರೆ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಕೇಳ್ತಾ ಇದ್ದಾರೆ ಅಂತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳಿದರು. ಆದರೆ ನಾವು ಗ್ಯಾರಂಟಿಗಳಿಗೆ ಹಣ ಕೇಳಲಿಲ್ಲ. ನಮ್ಮ ಸಂಪನ್ಮೂಲಗಳಿಂದರೆ ಹಣ ಕ್ರೋಡೀಕರಣ ಮಾಡ್ತೇವೆ ಅಂತ ತಿಳಿಸಿದೆವು. ಹೀಗೆ ಸುಳ್ಳು ಹೇಳುವ ಸಂಸದರು ಮತ್ತು ಕೇಂದ್ರ ಸರ್ಕಾರ ಬೇಕಾಗಿಲ್ಲ ಎಂದರು. ಬರ ಪರಿಹಾರ ಸಂಬಂಧ ಕೋರ್ಟ್‌ಗೆ ಹೋದೆವು. ಈಗ ಸರ್ಕಾರಕ್ಕೆ ಛೀಮಾರಿ ಹಾಕಿದ್ರು. ಆಗ ನೋಡಿ ಬರ ಪರಿಹಾರ ಸ್ವಲ್ಪ ಬಿಡುಗಡೆ ಮಾಡಿದರು. ಆದರೆ ನಾವು ಕೇಳಿದ್ದಷ್ಟು ಕೊಟ್ಟಿಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುವುದು ಎಂದರು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಹತ್ತು ವರ್ಷ ಆಯಿತು. ಆದರೆ ಅವರು ನೀಡಿದ ಭರವಸೆಗಳನ್ನು ಈವರೆಗೆ ಈಡೇರಿಸಿಲ್ಲ. ಸ್ವಿಸ್‌ ಬ್ಯಾಂಕಿನಿಂದ ಹಣ ತಂದು ಎಲ್ಲ ಖಾತೆಗೆ ಹದಿನೈದು ಲಕ್ಷ ಹಾಕ್ತೀವಿ ಅಂದ್ರು. ಆದರೆ ಮಾಡಲಿಲ್ಲ. ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇವೆ ಅಂದ್ರು.  ಆದರೆ ಮಾಡಲಿಲ್ಲ. ಇಂಧನ, ಗೊಬ್ಬರ, ಅಡುಗೆ ಎಣ್ಣೆ, ಅಡುಗೆ ಅನಿಲ ಬೆಲೆ ಕಡಿಮೆಯಾಗಲಿಲ್ಲ. ಇದಕ್ಕೆಲ್ಲ ಯಾರು ಕಾರಣ ನರೇಂದ್ರ ಮೋದಿ ಅವರೇ ಎಂದು ಪ್ರಶ್ನಿಸಿದರು. ರೈತ ಸಂಘದವರು ಚಳವಳಿ ಮಾಡ್ತ ಇದ್ದಾರೆ. ಸಾಲ ಮನ್ನಾ ಮಾಡಿ. ಎಂಎಸ್‌ಪಿ ಗೆ ಕಾನೂನು ಕೊಡಿ ಅಂದ್ರು. ೭೦೦ ಕ್ಕೂ ಹೆಚ್ಚು ರೈತರ ಸತ್ತರು. ಅವರ ಮೇಲೆ ಕೇಸ್‌ ಹಾಕಿ ಅರೆಸ್ಟ್‌ ಮಾಡಿ ಜೈಲಿಗೆ ಹಾಕ್ತಾರೆ ಎಂದು ತಿಳಿಸಿದರು. ನಾವು ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಕೊಟ್ಟಿದ್ದೇವೆ. ಅನ್ನಭಾಗ್ಯಕ್ಕೆ ಅಕ್ಕಿ ಕೊಡಿ ಅಂದ್ರೆ ಕೊಡಲಿಲ್ಲ. ರಾಜ್ಯಕ್ಕೆ ದ್ರೋಹ ಬಗೆದರು. ಆದರೆ ನಾವು ಅಕ್ಕಿ ಬದಲು ಹಣ ಕೊಟ್ಟೆವು. ಕೇಂದ್ರ ಸರ್ಕಾರ ೨೫ ಗ್ಯಾರಂಟಿ ಘೋಷಣೆ ಮಾಡಿದೆ. ದಯಮಾಡಿ ಈ ಬಾರಿ ಕಾಂಗ್ರೆಸ್‌ ಗೆಲ್ಲಿಸಿ ಎಂದು ಮನವಿ ಮಾಡಿದರು. ಸಂಯುಕ್ತ ಪಾಟೀಲ್‌ ಅವರು ಸಂಸತ್ತಿನಲ್ಲಿ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಅವರ ಕ್ರಮ ಸಂಖ್ಯೆ ಮೂರು. ಹಸ್ತದ ಗುರುತಿಗೆ ಮತ ಹಾಕಿ ಲೋಕಸಭೆಗೆ ಕಳುಹಿಸಿ ಎಂದು ಮನವಿ ಮಾಡಿದರು. ಸಮಾವೇಶಕ್ಕೆ ಭಾರಿ ಜನಬೆಂಬಲ ವ್ಯಕ್ತವಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿ ಸಮಾವೇಶವನ್ನು ಯಶಸ್ವಿಗೊಳಿಸಿದರು. ಬಿಸಿಲಿ ಝಳದ ನಡುವೆ ಅಪಾರ ಜನರು ಸೇರಿದ್ದು ವಿಶೇಷವಾಗಿತ್ತು.  ಅವಕಾಶ ನೀಡಿ: ಸಂಯುಕ್ತ ಪಾಟೀಲ್‌ ಮನವಿ ಕ್ಷೇತ್ರದ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಅವರು ಮಾತನಾಡಿ, ಬಾಗಲಕೋಟೆಯ ಸಮಗ್ರ ಅಭಿವೃದ್ಧಿಗೆ ಈ ಬಾರಿ ಕಾಂಗ್ರೆಸ್‌ ಗೆಲ್ಲಿಸಿ ಎಂದು ಮನವಿ ಮಾಡಿದರು. ನಿಮ್ಮ ಮನೆ ಮಗಳಾಗಿ ಕೆಲಸ ಮಾಡುತ್ತೇನೆ. ಅದಕ್ಕಾಗಿ ಒಂದು ಅವಕಾಶ ನೀಡಿ. ಇಪ್ಪತ್ತು ವರ್ಷಗಳಲ್ಲಿ ಆಗದ ಅಭಿವೃದ್ಧಿ ಮಾಡುತ್ತೇವೆ. ನಿಮ್ಮ ಬೆಂಬಲ, ಪ್ರೋತ್ಸಾಹ ಇರಲಿ ಎಂದು ಹೇಳಿದರು. ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರ್ ಬಿ ತಿಮ್ಮಾಪುರ, ಶ್ರೀ ಶಿವಾನಂದ ಪಾಟೀಲ್, ಹಿರಿಯರು ಮಾಜಿ ಸಚಿವರಾದ ಶ್ರೀ ಎಸ್ ಆರ್ ಪಾಟೀಲ್, ಜಿಲ್ಲಾಧ್ಯಕ್ಷರಾದ ಶ್ರೀ ಎಸ್ ಜಿ ನಂಜಯ್ಯನಮಠ ಅವರು ಶಾಸಕರುಗಳಾದ ಲಕ್ಷಣ ಸವದಿ, ವಿನಯ್ ಕುಲಕರ್ಣಿ, ಜೆ ಟಿ ಪಾಟೀಲ್, ವಿಜಯಾನಂದ ಕಾಶಪ್ಪನವರ, ಬಾದಾಮಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಭೀಮಸೇನ ಬಿ ಚಿಮ್ಮನಕಟ್ಟಿಯವರು , ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಸುನೀಲ್ ಗೌಡ ಪಾಟೀಲ್, ಶ್ರೀಮತಿ ಉಮಾಶ್ರೀ, ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಬಿ ಆರ್ ಯಾವಗಲ್ ಅವರು ಮಾಜಿ ಹಾಗೂ ಹಾಲಿ ಸದಸ್ಯರುಗಳು,ಎಐಸಿಸಿ ಪ್ರತಿನಿಧಿ ಹಾಗೂ ಪಕ್ಷದ ಮುಖಂಡರು, ಹಿರಿಯರು, ಜಿಲ್ಲಾ ಕಾಂಗ್ರೆಸ್ ಸಮಿತಿಯವರು, ತಾಯಂದಿರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

No Ads
No Reviews
No Ads

Popular News

No Post Categories
Sidebar Banner
Sidebar Banner